ಪಂಚ್ -
	ಲಂಡನ್ನಿನಿಂದ ಪ್ರಕಟವಾಗುವ ಸುಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ. ಜಗತ್ತಿನಾದ್ಯಂತ ಇದಕ್ಕೆ ಓದುಗರಿದ್ದಾರೆ.

	ಹಾಸ್ಯವೇ ಉದ್ದೇಶವಾಗಿ ಉಳ್ಳ ಪತ್ರಿಕೆಗಳು ಬಹುಕಾಲ ಬದುಕಿರುವುದು ಪತ್ರಿಕೋದ್ಯಮದ ಇತಿಹಾಸದಲ್ಲೇ ಅಪರೂಪ. ಎಲ್ಲ ಬಗೆಯ ಆತಂಕಗಳನ್ನೂ ಮೆಟ್ಟಿ ನಿಂತಿರುವ ಪಂಚ್ ಹುಟ್ಟಿ ಒಂದು ಶತಮಾನಕ್ಕಿಂತ ಹೆಚ್ಚು ಕಾಲವಾಗಿದೆ. ಇದೊಂದು ದಾಖಲೆ.

	ಹಾಸ್ಯ ಪ್ರಧಾನವಾದ ಪತ್ರಿಕೆಯೊಂದನ್ನು ಸ್ಥಾಪಿಸುವ ಆಲೋಚನೆ ಇ.ಲ್ಯಾಂಡೆಲ್ಸ್ ಎಂಬ ಕುಶಲ ನಕಾಸೆಗಾರನಿಗೆ ಬಂತು. ಪ್ಯಾರಿಸ್ ನಗರದಲ್ಲಿ ಇಂಥ ಪತ್ರಿಕೆಯೊಂದು ಯಶಸ್ಸು ಗಳಿಸಿದ್ದುದು ಇದಕ್ಕೆ ಸ್ಫೂರ್ತಿಯಾಯಿತು. ಈ ಕೆಲಸದಲ್ಲಿ ಅವನ ಜೊತೆಗೂಡಿದವರು ಹೆನ್ರಿ ಮೇಹ್ಯೂ ಮತ್ತು ಮಾರ್ಕ್‍ಲೆಮನ್. ಪತ್ರಿಕೆ ಹೊರಡಿಸಲು ಅವರ ಬಳಿ ಇದ್ದ ಬಂಡವಾಳ ಇಪ್ಪತ್ತೈದು ಪೌಂಡುಗಳು ಮಾತ್ರ. ಪ್ರಥಮ ಸಂಚಿಕೆ ಹೊರಬಿದ್ದದ್ದು 1841ರ ಜುಲೈ 17ರಂದು. ಬೆಲೆ ಮೂರು ಪೆನ್ನಿ. ಪತ್ರಿಕೆಯ ಉಪನಾಮ ಲಂಡನ್ ಚಾರಿವಾರಿ. ಪ್ರಸಿದ್ಧ ಫೆಂಚ್ ಹಾಸ್ಯ ಪತ್ರಿಕೆಯ ಹೆಸರು ಚಾರಿವಾರಿ. ಮೇಹ್ಯೂ ಮಾರ್ಕ್ ಲೆಮನ್ ಮತ್ತು ಜೋಸೆಫ್ ಸ್ಟರ್ಲಿಂಗ್ ಕಾಯ್ನ್ ಇದರ ಸಂಪಾದಕರಾದರು. ಮಾಕ್ ಲೆಮನ್ ಮುಖ್ಯಸ್ಥ. 

	ಪಂಚ್ ಪ್ರಕಟಣೆ ಆರಂಭವಾದ ಕಾಲದಲ್ಲಿ ಹೊಸ ವೆಸ್ಟ್‍ಮಿನಿಸ್ಟರ್ ಭವನದ ನಿರ್ಮಾಣವಾಗುತ್ತಿತ್ತು. ರಾಜಕುಮಾರ ಆಲ್ಬರ್ಟನೂ ಅವನ ಕಲಾ ಸಲಹೆಗಾರರೂ ಹೊಸ ಕಟ್ಟಡದ ಗೋಡೆಗಳನ್ನು ಕಲಾಕೃತಿಗಳಿಂದ ಅಲಂಕರಿಸಬೇಕೆಂದು ಇಚ್ಛಿಸಿದರು. ಇದಕ್ಕಾಗಿ ಭಿತ್ತಿಚಿತ್ರ ರಚನೆಯ ಸ್ಪರ್ಧೆಯೊಂದನ್ನು ಏರ್ಪಡಿಸಿದರು. ಸ್ಪರ್ಧೆಗೆ ಬಂದಿದ್ದ ಕೃತಿಗಳನ್ನು ಪ್ರದರ್ಶಿಸಲಾಯಿತು. ಆ ಕೆಲಸದ ಭವ್ಯ ಕಲ್ಪನೆಯೇ ಇಲ್ಲದ ಅನೇಕ ಕಲಾವಿದರ ಕೃತಿಗಳು ಹಾಸ್ಯಾಸ್ಪದವಾಗಿದ್ದುವು. ಪಂಚ್‍ಗೆ ಆ ಪ್ರದರ್ಶನದಿಂದ ವಸ್ತು ದೊರಕಿತು. ಅದನ್ನು ವಿಡಂಬಿಸಿ ಪಂಚ್ ಅನೇಕ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತು. 1832ರಲ್ಲಿ ಚಾಲ್ರ್ಸ್ ಫಿಲಿಪೋನನಿಂದ ಆರಂಭವಾಗಿದ್ದ ಫ್ರೆಂಚ್ ಹಾಸ್ಯಪತ್ರಿಕೆ ಚಾರಿವಾರಿಯಂತೆ ಇದೂ ರಾಜಕೀಯ ಸಾಮಾಜಿಕ ಟೀಕೆಯ ಶಕ್ತ ಮಾಧ್ಯಮವಾಗಿ ಪರಿಣಮಿಸಿತು.

	ಮೊದಲ ದಿನಗಳಲ್ಲಿ ಪಂಚ್ ಪತ್ರಿಕೆಯ ಪ್ರಸಾರ ಕೇವಲ 5,000-6,000 ದಷ್ಟಿತ್ತು. ಆರ್ಥಿಕವಾಗಿ ನಿಲ್ಲಲು 10,000 ಪ್ರತಿಗಳಷ್ಟಾದರೂ ಪ್ರಸಾರದ ಅವಶ್ಯಕತೆ ಇತ್ತು. ಒಂದನೆಯ ಮಹಾಯುದ್ಧದ ವರೆಗೆ ಪತ್ರಿಕೆಯ ಬೆಲೆಯನ್ನು ಏರಿಸಲಿಲ್ಲ. ಯುದ್ಧದ ಪರಿಣಾಮವಾಗಿ ಮುದ್ರಣವೆಚ್ಚ ಅತಿಯಾಗಿ ಹೆಚ್ಚಿದಾಗ ಪತ್ರಿಕೆಯ ಬೆಲೆಯನ್ನು ಆರು ಪೆನ್ನಿಗಳಿಗೆ ಹೆಚ್ಚಿಸಲಾಯಿತು.

	ಆರ್ಥಿಕವಾಗಿ ಅಪಾಯದ ಅಂಚಿನಲ್ಲಿ ಇದ್ದರೂ ಪತ್ರಿಕೆಯನ್ನು ಮುದ್ರಿಸಲು ಧೈರ್ಯ ಮಾಡಿದವರು ಮುದ್ರಕರಾದ ಬ್ರಾಡ್‍ಬರಿ ಮತ್ತು ಇವಾನ್ಸ್, ಸ್ವಲ್ಪ ಕಾಲದ ಅನಂತರ ಅವರು ಪತ್ರಿಕೆಯ ಮಾಲೀಕರಾದರು. ಇಂದಿಗೂ ಅವರ ವಂಶದವರೇ ಇದರ ಮಾಲೀಕರು. ಪಂಚ್ ಮೊದಲಲ್ಲಿ ರಾಜಸತ್ತೆಯನ್ನು ತೀವ್ರವಾಗಿ ಟೀಕಿಸುತ್ತಿತ್ತು. ಅನಂತರ ತನ್ನ ಧ್ವನಿಯನ್ನು ಇಳಿಸಿತು. ಜಾನ್ ಲೀಚ್ ಬರೆಯುತ್ತಿದ್ದ ವ್ಯಂಗ್ಯಚಿತ್ರಗಳು ಖಾರವಾಗಿರುತ್ತಿದ್ದವು. ಫ್ರಾನ್ಸಿನ 3ನೆಯ ನೆಪೋಲಿಯನ್ ಮತ್ತು ರಷ್ಯದ 1ನೆಯ ನಿಕೊಲಾಸರನ್ನು ಲೇವಡಿ ಮಾಡಿ ಲೀಚ್ ವ್ಯಂಗ್ಯಚಿತ್ರಗಳನ್ನು ಬರೆದ. ತತ್ಫಲವಾಗಿ ವಿದೇಶಗಳಲ್ಲಿ ಪಂಚ್ ಪತ್ರಿಕೆಗೆ ಬಹಿಷ್ಕಾರ ಹಾಕಲಾಯಿತು. ಸ್ವಲ್ಪ ಕಾಲದ ಅನಂತರ ಲೀಚ್ ತನ್ನ ರೇಖಾಟೀಕೆಯನ್ನು ಮೃದುಗೊಳಿಸಿದರು.

	ಸುಮಾರು 1842ರಲ್ಲಿ ಪ್ರಕಟವಾದ ಮೊದಲ ಪಂಚ್ ಆಲ್ಮನಾಕ್ ತುಂಬ ಯಶಸ್ಸು ಗಳಿಸಿತು. ಪತ್ರಿಕೆಯ ಮಾರಾಟ ಏರಿತು. ಕ್ರಮೇಣ ಪಂಚ್ ತನ್ನ ಆರಂಭದ ದಿನಗಳ ಜಡತೆಯನ್ನು ಕಳೆದುಕೊಂಡಿತ್ತು. ಅದು ಹೊಸ ನುಡಿಚಿತ್ರಗಳನ್ನು ಪ್ರಕಟಿಸತೊಡಗಿತ್ತು. ರಾಜಕೀಯವಿಚಾರಗಳಲ್ಲೂ ತೀವ್ರ ಆಸ್ಥೆ ತೋರಿಸಿದ್ದರಿಂದ ವಾರದ ಪ್ರಸಾರ 30,000 ಪ್ರತಿಗಳನ್ನು ಮುಟ್ಟಿತು.

	ಪಂಚ್ ಪತ್ರಿಕೆಯ ಖ್ಯಾತ ಸಂಪಾದಕರು 1841-70ರಲ್ಲಿ ಮಾರ್ಕ್ ಲೆಮನ್, 1870-74ರಲ್ಲಿ ಷರ್ಲಿ ಬ್ರೂಕ್ಸ್, 1874-80ರಲ್ಲಿ ಟಮ್ ಟೇಲರ್, 1880-1906ರಲ್ಲಿ ಸರ್ ಫ್ರಾನಿಸ್ ಬರ್ನಾಂಡ್, 1906-32ರಲ್ಲಿ ಸರ್ ಓವೆನ್ ಸೀಮನ್, 1932-49ರಲ್ಲಿ ಇ.ವಿ.ನಾಕ್ಸ್, 1949-52ರಲ್ಲಿ ಸಿರಿಲ್ ಕೆನೆತ್‍ಬರ್ಡ್, 1953-57ರಲ್ಲಿ ಮಾಲ್ಕಮ್ ಮಗ್‍ರಿಜ್. ಇವರ ತರುವಾಯ ಬರ್ನಾಡ್ ಹಾಲೋವುಡ್ ವಿಲಿಯಂ ಡೇವಿಸ್ ಸಂಪಾದಕರಾದರು.	

	ಪತ್ರಿಕೆಗೆ ರಾಷ್ಟ್ರೀಯ ಮಹತ್ತ್ವ ತಂದುಕೊಟ್ಟ ಬರಹಗಾರರು ಹಲವರು. ಹತ್ತೊಂಬತ್ತನೆಯ ಶತಮಾನದ ಪ್ರಮುಖ ಲೇಖಕರು ಥ್ಯಾಕರೆ, ಡಗ್ಲಾಸ್ ಜೆರಾಲ್ಡ್, ಥಾಮಸ್ ಹೂಡ್, ಆರ್ಟಿಮಸ್ ವಾರ್ಡ್ ಮತ್ತು ಎಚ್.ಡಬ್ಲ್ಯು.ಲೂಸಿ ಕೆಲವು ಆಧುನಿಕ ಬರಹಗಾರರು ಆಲಾನ್ ಹರ್ಬರ್ಟ್, ಇ.ವಿ.ಲೂಕಾಸ್, ಎ.ಎ.ಮಿಲ್ನ್ ಮತ್ತು ಆಂಟೊನಿ ಆರ್ಮ್‍ಸ್ಟ್ರಾಂಗ್.

	ಹಿಂದಿನ ಶತಮಾನದಲ್ಲಿ ವ್ಯಂಗ್ಯಚಿತ್ರಗಳನ್ನು ಬರೆದ ಪ್ರಮುಖರು ರಿಚರ್ಡ್ ಡಾಯ್ಲ್, ಜಾನ್ ಲೀಚ್, ಚಾಲ್ರ್ಸ್‍ಕೀನ್, ಜಾನ್ ಟೆನಿಯೆಲ್, ಜಾರ್ಜ್ ಡು ಮಾರಿಯರ್, ಫಿಲ್ ಮೇ ಹಾಗೂ ಹ್ಯಾರಿ ಫರ್ನಿಸ್, ಟೆನಿಯೆಲ್ ಜಾರ್ಜ್ ಲೀಚನಷ್ಟೇ ಉತ್ತಮವಾದ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದರು. ಅವನ ಅನೇಕ ಚಿತ್ರಗಳನ್ನು ಬಹಳ ಜನಪ್ರಿಯವಾಗಿದ್ದುವು. ಆಧುನಿಕ ಚಿತ್ರಗಾರರಲ್ಲಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳನ್ನು ಬರೆದವರು ಬರ್ನಾರ್ಡ್ ಪ್ಯಾಟ್‍ರಿಜ್. ಇತರರು ಸಿರಿಲ್ ಕೆನೆತ್ ಬರ್ಡ್, ಜಾರ್ಜ್ ಮಾರೋ, ಜಾರ್ಜ್ ಬೆಲ್‍ಚರ್, ಪ್ರಾಂಕ್ ರೇನಾಲ್ಡ್ಸ್, ಚಾಲ್ರ್ಸ್ ಗ್ರೇವ್, ಅರ್ನೆಸ್ಟ್ ಷೆಪರ್ಡ್, ಎಲ್ ಜಿ.ಐಲಿಂಗ್ ವರ್ತ್ ಮತ್ತು ಗ್ರಹಾಮ್ ಲೇಡ್ಲರ್. 1849 ರಿಂದ 1956 ರವರೆಗೆ ಡಾಯ್ಲ ಅವರು ಬರೆದ ಚಿತ್ರಗಳೇ ರಕ್ಷಾಪುಟದಲ್ಲಿ ಅಚ್ಚಾಗುತ್ತಿದ್ದವು.

	ಹಾಸ್ಯ ಪತ್ರಿಕೋದ್ಯಮದಲ್ಲಿ ಪಂಚ್ ಪತ್ರಿಕೆಗೆ ಸ್ಪರ್ಧಿಗಳೇ ಇಲ್ಲ. ಇದರೊಂದಿಗೆ ಸ್ಪರ್ಧಿಸಿದ ನೈಟ್ ಅಂಡ್ ಡೇ (1937) ಬಹುಕಾಲ ಉಳಿಯಲಿಲ್ಲ. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಕಟವಾದ ಕಾಮಿಕ್ ಟೈಮ್ಸ್, ಟಾಮ್‍ಹಾಕ್, ಫನ್, ಏರಿಯಲ್, ಜೂಡಿ, ಮೂನ್‍ಷೈನ್ ಮತ್ತು ಲೈಕಾ ಜೋಕೊ ಪತ್ರಿಕೆಗಳು ಓದುಗರನ್ನು ಆಕರ್ಷಿಸಲು ವಿಫಲಗೊಂಡುವು.

	ಪಂಚ್ ಪತ್ರಿಕೆಯ ವ್ಯಂಗ್ಯಚಿತ್ರಗಳನ್ನು ಇತರ ಪತ್ರಿಕೆಗಳೂ ಪುರಸ್ಕರಿಸುತ್ತವೆ. ದಿ ಟೈಮ್ಸ್ ಪತ್ರಿಕೆ ಪಂಚ್‍ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು ಪುನರ್ ಮುದ್ರಿಸಿದೆ. ಇತ್ತೀಚಿನವರೆಗೂ ಭಾರತದ ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಪಂಚ್‍ನ ವ್ಯಂಗ್ಯಚಿತ್ರಗಳು ಪುನರ್ ಪ್ರಕಟವಾಗುತ್ತಿದ್ದುವು. ಪಂಚ್ ಪ್ರತಿ ವರ್ಷವೂ ಪತ್ರಿಕಾ ಸೂಚಿಯೊಂದನ್ನು ಪ್ರಕಟಿಸುತ್ತದೆ. 1992ರಲ್ಲಿ ಪ್ರಕಟಣೆ ನಿಂತಿತು ಮತ್ತು 1996ನೇ ಸೆಪ್ಟೆಂಬರ್‍ನಿಂದ ಪ್ರಕಟಣೆ ಆರಂಭವಾಗಿದೆ.				  

(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ